ವಿಜಯಪುರ: ಕಳೆದೊಂದು ವರ್ಷದಿಂದ ಪದೇ ಪದೇ ಭೂಮಿ ಕಂಪಿಸುತ್ತಲೇ ಇದ್ದ, ಜನರ ಆತಂಕ ಹೆಚ್ಚಾಗಿದ್ದರೂ ಅಧಿಕಾರಿಗಳು ಮಾತ್ರ ನಿರಾತಂಕವಾಗಿದ್ದಾರೆ.
ಆಗಾಗ ಕೇಳಿ ಬರುತ್ತಿರುವ ಜೋರಾದ ಸದ್ದು ಜನರ ಎದೆ ನಡುಗಿಸುತ್ತಿದೆ. ಆದರೆ, ಅಧಿಕಾರಿಗಳು ಇದೊಂದು ಸಾಮಾನ್ಯ ಪ್ರಕ್ರಿಯೆ ಎನ್ನುತ್ತಿದ್ದಾರೆ. ಕೆಲವೊಮ್ಮ ದೊಡ್ಡ ಪ್ರಮಾಣದಲ್ಲಿ ಭೂಮಿ ಕಂಪಿಸಿದರೂ ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರ ದಾಖಲಾಗಿಲ್ಲ ಎನ್ನುತ್ತಾರೆ. ಹೀಗಾಗಿ ಜನರ ಆತಂಕ ಹೆಚ್ಚಾಗುತ್ತಿದ್ದು, ಜೀವ ಅಂಗೈಯಲ್ಲಿ ಹಿಡಿದು ಜೀವಿಸುವಂತಾಗಿದೆ. ಸ್ವಲ್ಪ ನೆಲ ಅದುರಿದರೂ ರಾತ್ರಿಯಿಡೀ ನಿದ್ರೆಗೆಡುವ ಸ್ಥಿತಿ ನಿರ್ಮಾಣವಾಗಿದೆ. ಯಾವಾಗ ಏನಾಗುತ್ತದೆಯೋ ಎಂಬ ಭಯ ಕಾಡಲಾರಂಭಿಸಿದೆ.
ಕಳೆದ ಎರಡು ವಾರದಲ್ಲಿ ಹಲವು ಬಾರಿ ಹಲವರಿಗೆ ಭೂಕಂಪನದ ಅನುಭವ ಹಾಗೂ ಭಾರಿ ಶಬ್ದದಿಂದ ನಗರದ ಕೆಲವೊಂದು ಬಡಾವಣೆಗಳಲ್ಲಿ ಜನರ ಭಯಭೀತರಾಗಿ ಮನೆಯಿಂದ ಹೊರ ಬಂದಿದ್ದಾರೆ. ಇದು ಭೂಕಂಪನ ಅಥವಾ ಯಾವುದೇ ಬೇರೆ ಕಾರಣಗಳಿಗೆ ಇಂತಹ ಘಟನೆಗಳಾಗುತ್ತಿವೆಯೇ ಎಂಬುದು ಜನರಿಗೆ ತಿಳಿಯದಾಗಿದೆ. ಪರಸ್ಪರ ತಮ್ಮ ಸ್ನೇಹಿತರಿಗೆ- ನೆರೆ ಹೊರೆಯವರಿಗೆ ಫೋನ್ ಮಾಡಿ ನಿಮಗೆ ಭೂಕಂಪನದ ಅನುಭವದ ಕುರಿತು ವಿಚಾರಣೆ ಮಾಡಿ, ಗೊಂದಲಕ್ಕೀಡಾಗಿದ್ದಾರೆ.
ಜನರಲ್ಲಿನ ಆತಂಕವನ್ನು ದೂರ ಮಾಡಲು ಸಂಬಂಧಿಸಿದ ಅಧಿಕಾರಿಗಳು, ಪರೀಕ್ಷೆ ನಡೆಸಿ ನಿಖರ ಕಾರಣ ಕಂಡು ಹಿಡಿಯಬೇಕಿದೆ. ವಿಜ್ಞಾನಿಗಳಿಂದ ಅಧ್ಯಯನ ನಡೆಯಬೇಕಿದೆ. ಯಾವುದೇ ದೊಡ್ಡ ಅನಾಹುತ ಸಂಭವಿಸುವ ಮೊದಲೇ ಅಧಿಕಾರಿಗಳು ಈ ವಿಷಯದ ಗಂಭೀರತೆಯನ್ನು ಅರಿತುಕೊಂಡು ಇಂತಹ ಘಟನೆಗಳು ಜರುಗಲು ಇರುವ ವೈಜ್ಞಾನಿಕ ಕಾರಣವನ್ನು ಕಂಡು ಹಿಡಿದು ಜನರಿಗೆ ಈ ಕುರಿತು ತಿಳುವಳಿಕೆ ಮೂಡಿಸಿದ್ದಲ್ಲಿ ಮಾತ್ರ ಜನರು ನಿಟ್ಟುಸಿರು ಬಿಡಲು ಸಾಧ್ಯವಾಗುತ್ತದೆ. ಇಲ್ಲಿ ನಡೆಯುತ್ತಿರುವ ಶಬ್ದ-ಕಂಪನ ಭೂಕಂಪನವೇ ಆಗಿದ್ದಲ್ಲಿ ಸೂಕ್ತ ಎಚ್ಚರಿಕೆ ಜಿಲ್ಲಾಡಳಿತದಿಂದ ನೀಡಿ, ಯಾವುದೇ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತವಾಗಿದೆ.
ಭೂಕಂಪನ ಸಂಭವಿಸಿರುವ ಕುರಿತು ಜಿಲ್ಲೆಯಲ್ಲಿ ಸ್ಥಾಪಿಸಲಾದ ಭೂಕಂಪನ ಮಾಪನ ಕೇಂದ್ರದಲ್ಲಿ ದಾಖಲಾಗಿಲ್ಲ. ಪದೇ ಪದೇ ಕಂಪನ ಹಾಗೂ ಭಾರಿ ಶಬ್ದವಾಗುವುದು ಇದು ಭೂಕಂಪನವಲ್ಲ, ಇದೊಂದು ಭೂಮಿಯೊಳಗೆ ಕ್ರಿಯೆಯಾಗಿದೆ. ಇದರಿಂದ ಭೂಮಿಯ ಮೇಲ್ಮೈ ಭಾಗದಲ್ಲಿ ಯಾವುದೇ ಹಾನಿವುಂಟು ಮಾಡುವುದಿಲ್ಲ ಎಂದು ಅಧಿಕಾರಿಗಳ ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.

ಕಾಮೆಂಟ್ ಪೋಸ್ಟ್ ಮಾಡಿ